ಆನಿ ಬೆಸೆಂಟ್
(1847-1933). ನಾನಾಮುಖವಾದ ಅಸಾಧಾರಣ ಪ್ರತಿಭೆ, ತೀಕ್ಷ್ಣಬುದ್ಧಿ, ತಾನು ಸರಿಯೆಂದು ತಿಳಿದಿದ್ದನ್ನು ಎಂಥ ಪರಿಸ್ಥಿತಿಯಲ್ಲೂ ಬಿಟ್ಟುಕೊಡದ ದಿಟ್ಟತನ, ಸಂಘಟನಾ ಶಕ್ತಿ, ಬೆರಗುಗೊಳಿಸುವ ವಾಕ್ಪಟುತ್ವ ಇವೆಲ್ಲವನ್ನೂ ಹೊಂದಿ, ಭಾರತವನ್ನು ತನ್ನ ಮಾತೃಭೂಮಿಯನ್ನಾಗಿ ಮಾಡಿಕೊಂಡು, ಅದರ ಭವ್ಯಸಂಸ್ಕøತಿಯ ಪುನರುಜ್ಜೀವನಕ್ಕೆ, ಭಾರತೀಯರ ದಾಸ್ಯವಿಮೋಚನೆಗೆ, ನಲವತ್ತು ವರ್ಷಕಾಲ ಅವಿಶ್ರಾಂತವಾಗಿ ದುಡಿದ ಐರಿಷ್ ಮಹಿಳೆ, ಹುಟ್ಟಿದ್ದು ಲಂಡನ್ನಿನಲ್ಲಿ. ಮನೆಯಲ್ಲೇ ವಿದ್ಯಾಶಿಕ್ಷಣವಾಯಿತು. ಫ್ರೆಂಚ್, ಜರ್ಮನ್ ಮುಂತಾದ ಭಾಷೆಗಳನ್ನೂ ಕಲಿತು, ತನ್ನ ಇಪ್ಪತ್ತನೆಯ ವಯಸ್ಸಿನಲ್ಲೇ ಪಾಂಡಿತ್ಯವನ್ನೂ, ಅಸಾಧಾರಣ ಬುದ್ಧಿಶಕ್ತಿಯನ್ನೂ ಪಡೆದಿದ್ದಳು. ಫ್ರಾಂಕ್ ಬೆಸೆಂಟ್ನೊಡನೆ ವಿವಾಹವಾಯಿತು. ಆತನೊಬ್ಬ ಆಂಗ್ಲಿಕನ್ ಕ್ರೈಸ್ತಪಾದ್ರಿ. ಮತವಿಷಯಗಳಲ್ಲೂ ಅಂಧ ಶ್ರದ್ಧೆಯನ್ನೊಪ್ಪದ ಅವಳಿಗೆ ಗಂಡನ ಅಂಧಾಭಿಮಾನ ಬೇಸರ ತಂದಿತು. ಇವಳ ಮತಶ್ರದ್ಧೆಯೂ ಬದಲಾವಣೆ ಹೊಂದಿತು. ದೇವಾಸ್ತಿಕ್ಯವನ್ನೇ ನಂಬದೆ ನಿರೀಶ್ವರವಾದಿಯಾದಳು. ಇದು ದಾಂಪತ್ಯ ವಿಚ್ಛೇದನದಲ್ಲಿ ಕೊನೆಗಂಡಿತು. (1873) 

	ಮತಧರ್ಮಗಳ ವಿಷಯದಲ್ಲಿ ಸ್ವತಂತ್ರ ವಿಚಾರಿಯಾಗಿದ್ದ ಚಾರಲ್ಸ್‍ಬ್ರಾಡ್‍ಲ ಎಂಬುವನೊಂದಿಗೆ ಕೆಲಸಮಾಡಿ ಸಂತಾನನಿಯಂತ್ರಣ ಚಳವಳಿಯಲ್ಲಿ ಭಾಗವಹಿಸಿದಳು. ಸಂತಾನ ದೈವದತ್ತವಾದದ್ದು, ಅದರ ನಿಯಂತ್ರಣ ದೈವದ್ರೋಹ ಎಂದು ನಂಬಿದ್ದ ಕ್ರೈಸ್ತ ಸನಾತನಿಗಳಿಗೆ ಇವಳ ಚಟುವಟಿಕೆಗಳು ಅಸಹನೀಯವಾದುವು. ಈಕೆಗೆ ತುಂಬ ಕಿರುಕುಳ ಕೊಟ್ಟರು. ಇವಳ ಮೇಲೆ ಕಾನೂನುಕ್ರಮವೂ ಜರುಗಿ ತಪ್ಪಿತಸ್ಥಳಲ್ಲವೆಂದು ತೀರ್ಮಾನವಾಯಿತು. ಈ ಕಾಲಕ್ಕಾಗಲೇ ತನ್ನ ಅಸಾಧಾರಣ ಬುದ್ಧಿಶಕ್ತಿ, ನಿವ್ರ್ಯಾಜ ಮನೋಭಾವ, ಮನಸೆಳೆಯುವ ವಾಕ್ಪಟುತ್ವ, ಸಂಘಟನಾಸಾಮಥ್ರ್ಯ-ಇವುಗಳಿಂದ ಜನಾನುರಾಗವನ್ನು ಸಂಪಾದಿಸಿದ್ದಳು. ಇವಳ ತೀವ್ರ ಸುಧಾರಣಾ (ರ್ಯಾಡಿಕಲ್) ಧೋರಣೆ ಕೆಲಕಾಲ ಬರ್ನಾರ್ಡ್‍ಷಾರವರ ಸಂಪರ್ಕದಿಂದಾದ ಪರಿಣಾಮವಾಗಿ, ಯಾವ ಸುಧಾರಣೆಯಾಗಲಿ ಮಂದಗತಿಯಿಂದ ಸಾಗಬೇಕೆಂಬ ಫೇಬಿಯನ್ ಸಮಾಜವಾದದ ಕಡೆ ಒಲಿಯಿತು. 

	ಅಂತಿಮವಾಗಿ ಇವಳ ಅಭಿಪ್ರಾಯಗಳನ್ನು ರೂಪಿಸಿ, ಆಜನ್ಮಪರ್ಯಂತ ಅವುಗಳನ್ನು ಕಾರ್ಯಗತಗೊಳಿಸುವುದಕ್ಕೆ ಪ್ರೇರೇಪಿಸಿದ್ದು, 1889ರಲ್ಲಿ ಥಿಯಾಸಫಿಯ ಮೊದಲನೆಯ ಪ್ರವರ್ತಕಳಾದ ಮೆಡಾಂ ಬ್ಲಾವಟ್ಸ್ಕಿಯೊಂದಿಗೆ ಅವಳಿಗೊದಗಿದ ಸಂಪರ್ಕ. ಅತೀಂದ್ರಿಯ ಸಿದ್ಧಾಂತವನ್ನೊಳಗೊಂಡ ಬ್ಲಾವಟ್ಸ್ಕಿಯ ದಿ ಸೀಕ್ರೆಟ್ ಡಾಕ್ಟ್ರಿನ್ ಎಂಬ ಗ್ರಂಥದ ವಿಚಾರಸರಣಿಗೆ ಮನಸೋತು, ನಾಸ್ತಿಕಳಾಗಿದ್ದ ಹೊಂಟ್ ಗಾಢಾನುರಕ್ತ ಆಸ್ತಿಕಳಾದಳು. 1891ರಲ್ಲಿ ಬ್ಲಾವಟ್ಸ್ಕಿ ಕಾಲವಾದ ಮೇಲೆ ಬೆಸೆಂಟ್ ಥಿಯಾಸಾಫಿಕಲ್ ಸೊಸೈಟಿಯ ಮುಖಂಡತ್ವವನ್ನು ವಹಿಸಿಕೊಂಡು, ಆಧ್ಯಾತ್ಮಿಕತೆಯ ಜನ್ಮಭೂಮಿಯೆಂದು ತಿಳಿದಿದ್ದ ಭಾರತಕ್ಕೆ 1893ರಲ್ಲಿ ಬಂದಳು. 

	ಪೂರ್ವಜನ್ಮಗಳಲ್ಲಿ ತಾನು ಹಿಂದೂ ಆಗಿದ್ದೆನೆಂಬ ಭಾವನೆ ಬಂದು, ಹಿಂದೂ ಧಾರ್ಮಿಕ ತತ್ವಗಳಲ್ಲಿ ಅಚಲವಿಶ್ವಾಸ, ನಂಬಿಕೆಗಳನ್ನು ಹೊಂದಿ, ಬೆಸೆಂಟ್ ಅವಕ್ಕೆ ಅನುಸಾರವಾಗಿ ಜೀವಿಸತೊಡಗಿದಳು. ಪರದಾಸ್ಯ, ಅದರಿಂದ ಉಂಟಾಗಿದ್ದ ದಟ್ಟ ದಾರಿದ್ರ್ಯಗಳ ಪರಿಣಾಮವಾಗಿ ಭಾರತೀಯರಲ್ಲಿ ಬೆಳೆದುಬಂದಿದ್ದ ವಿಷಣ್ಣತೆ, ನಿರುತ್ಸಾಹಗಳನ್ನು ಹೋಗಲಾಡಿಸಿ, ಅವರು ತಮ್ಮ ಭವ್ಯಸಂಸ್ಕøತಿಯ ಹಿರಿಮೆಯನ್ನರಿತು ಅದಕ್ಕನುಸಾರವಾದ ಹೊಸಹುಟ್ಟನ್ನು ರೂಪಿಸಿಕೊಂಡು, ಪ್ರಪಂಚಕ್ಕೆ ಮಾರ್ಗದರ್ಶಿಗಳಾಗುವಂತೆ ಮಾಡಬೇಕೆಂಬ ಉದ್ದೇಶದಿಂದ, ವಿದ್ವತ್‍ಪೂರ್ಣ ಗ್ರಂಥಗಳನ್ನು ಬರೆದಳು. ದೇಶದ ನಾನಾ ಕಡೆ ಸಂಚರಿಸಿ ಭಾಷಣ ಮಾಡಿದಳು. ಅಡ್ಯಾರಿನಲ್ಲಿ ತಾನೇ ಸ್ಥಾಪಿಸಿದ ಥಿಯಾಸಫಿ ಕೇಂದ್ರವನ್ನು ವಿದ್ವಾಂಸರ ವಿಚಾರವಿನಿಮಯ ಕ್ಷೇತ್ರವನ್ನಾಗಿ ಮಾಡಿದಳು. ವಾರಣಾಸಿಯಲ್ಲಿ ಸೆಂಟ್ರಲ್ ಹಿಂದೂ ಕಾಲೇಜ್ ಎಂಬ ಉಚ್ಚಶಿಕ್ಷಣ ವಿದ್ಯಾಶಾಲೆಯನ್ನು ಸ್ಥಾಪಿಸಿದಳು. ರಾಜಕೀಯ ಸ್ವಾತಂತ್ರ್ಯವಿಲ್ಲದೆ ಭಾರತೀಯ ಏಳಿಗೆ ಸಾಧ್ಯವಿಲ್ಲವೆಂಬುದನ್ನರಿತು, ಯಂಗ್ ಇಂಡಿಯಾ ಎಂಬ ಪತ್ರಿಕೆಯನ್ನು ಹೊರಡಿಸಿ ಅದರಲ್ಲಿ ಪ್ರಚಾರ ನಡೆಸಿದಳು. ಹೋಂ ರೂಲ್ ಚಳವಳಿ ಪ್ರಾರಂಭವಾಯಿತು. 1917ರಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷಳಾಗಿ ಚುನಾಯಿತಳಾದಳು. ಮುಂದೆ ಗಾಂಧೀಜಿ ಪ್ರಾರಂಭಿಸಿದ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಗಳನ್ನು ಅವಳು ಒಪ್ಪಲಿಲ್ಲ. ಅಶಿಕ್ಷಿತ ಜನರ ಕೈಯ್ಯಲ್ಲಿ ಆ ಚಳವಳಿಗಳಿಂದ ರಾಷ್ಟ್ರಘಾತಕ ಕೃತ್ಯಗಳು ನಡೆಯಬಹುದೆಂದು ವಾದಿಸಿದಳು. ಇದರಿಂದ ರಾಜಕೀಯ ರಂಗದಲ್ಲಿ ಅವಳ ಪ್ರಭಾವ ಕುಗ್ಗಿತು. ಅಂತೂ ಈ ಮಹಿಳೆ ಪರಕೀಯಳಾಗಿದ್ದು ಭಾರತದ ಏಳಿಗೆಗೆ ನಡೆಸಿದ ಕಾರ್ಯಭಾರ ಕೃತಜ್ಞತಾದ್ಯೋತಕವಾಗಿದೆ. 										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ